ಶ್ರೀ ಸಿದ್ಧಾರೂಢ ಮಠದಲ್ಲಿ ಆರಂಭವಾಗಿರುವ ಸಂಗೀತ ಕಾರ್ಯಕ್ರಮ & ಮಹಾತ್ಮರಿಂದ ಪ್ರವಚನ.
Date : 09-02-2026
ಮನಸೆಳೆದ ಮಕ್ಕಳ ಮಲ್ಲಕಂಬ, ಜಾನಪದ ನೃತ್ಯ
ಸಿದ್ಧಾರೂಢಮಠದಲ್ಲಿ ಭಕ್ತಿ ಭಾವಗಳ ಸಂಗೀತ
ಹುಬ್ಬಳ್ಳಿ : ಶಿವರಾತ್ರಿ ಮತ್ತು ಜಾತ್ರಾಮಹೋತ್ಸವ ಅಂಗವಾಗಿ ಇಲ್ಲಿಯ ಸಿದ್ಧಾರೂಢ ಮಠದಲ್ಲಿ ಆರಂಭವಾಗಿರುವ ಸಂಗೀತ ಕಾರ್ಯಕ್ರಮದಲ್ಲಿ ಬುಧವಾರ ರಾತ್ರಿ ಭಕ್ತಿ ಗೀತೆಗಳ ಮಹಾಪೂರವೇ ಹರಿದು, ಸದ್ಭಕ್ತರನ್ನು ಭಾವಾವೇಶದಲ್ಲಿ ತೇಲಿಸಿತಲ್ಲದೇ ಮಧ್ಯರಾತ್ರಿಯ ಚಳಿಯಲ್ಲೂ ಶರ್ಟ್ ಇಲ್ಲದೇ ಮಲ್ಲಕಂಬ ಕಸರತ್ತು ಪ್ರದರ್ಶನ ನೀಡಿದ ಪುಟ್ಟ ಪುಟ್ಟ ಮಕ್ಕಳು ನೋಡುಗರಿಂದ ಸೈ ಎನಿಸಿಕೊಂಡಿತು.
ಪ್ರಸಿದ್ಧ ಯುವ ಗಾಯಕಿ ಕುಮಾರಿ ಐಶ್ವರ್ಯ ದೇಸಾಯಿ ತಮ್ಮ ಇಂಪಾದ ಕಂಠದಲ್ಲಿ ತಾನ್ ಮತ್ತು ಸರಿಗಮ್‌ಗಳಿಂದ ಕೂಡಿದ ಮಾತಾ ಭವಾನಿ(ರಾಗ:ದುರ್ಗಾ), ಎರಡು ಭಕ್ತಿ ಗೀತೆ ಕಾಸಿ ಕಮ್ಮಾರನಾದ, ಕೈಲಾಸವಾಸ ಗೌರೀಶ ಹಾಡಿ ಸಭಿಕರ ಮನಗೆದ್ದರು. ದಾವಣಗೆರೆಯ ಕುಮಾರಿ ಗೌರಿ ಜೋಶಿ ಶಂಕರಾ ರಾಗದಲ್ಲಿ ಪ್ರಸ್ತುತಪಡಿಸಿದ ಗಾಯನ ಕೂಡ ಅಷ್ಟೇ ಪರಿಣಾಮಕಾರಿಯಾಗಿತ್ತು.
ಭಾಗ್ಯಶ್ರೀ ಹೂಗಾರ ಸಿತಾರ ವಾದನದಲ್ಲಿ ರಾಗ ಚಾರುಕೇಶಿ ನುಡಿಸಿ ಇಡೀ ಮಠದ ಆವರಣವು ಸಿತಾರ ಝೇಂಕಾರನಿಂದ ತುಂಬುವಂತೆ ಮಾಡಿದರು. ವೀಣಾ ಬಡಿಗೇರ, ರಶ್ಮಿ ಕಾಖಂಡಕಿ, ಯುಮುನಾ ಬೆಳಗಲಿ, ಪಂಡಿತ ಕೃಷ್ಣೇಂದ್ರ ವಾಡೀಕರ, ಶೇಷಗಿರಿ ಗುಡಿ, ರಾಮಚಂದ್ರ ಇಬ್ರಾಹಿಂಪುರ ಭಕ್ತಿಗೀತೆಗಳನ್ನು ಹಾಡಿದರು.
ಮಕ್ಕಳ ಸಾಹಿತ್ಯ ಅಕಾಡೆಮಿಯ ವಿದ್ಯಾರ್ಥಿನಿಯರು ಸುಗ್ಗಿ ಕುರಿತು ಜಾನಪದ ನೃತ್ಯವನ್ನೂ, ಸಂತೋಷ ಮಲ್ಲಕಂಬ ಅಕಾಡೆಮಿಯ ವಿದ್ಯಾರ್ಥಿಗಳು ಮಲ್ಲಕಂಬ ಪ್ರದರ್ಶನ ನೀಡಿದರು.
ಸದ್ಗುರುಗಳ ಸತ್ಸಂಗದಿಂದ ಮೋಹ ತ್ಯಾಗ
ಹುಬ್ಬಳ್ಳಿ: ಎಲ್ಲವೂ ತನ್ನದು ಎನ್ನುವ ಮನುಷ್ಯ ಜೀವಿ ಮಮಕಾರ ಎಂಬ ಬಂಧನವನ್ನು ಸದ್ಗುರುಗಳ ಸತ್ಸಂಗದಿAದ ಬಿಡಿಸಿಕೊಂಡು ಭಗವಂತನ ಸಾಕ್ಷಾತ್ಕಾರಕ್ಕೆ ಪ್ರಯತ್ನಿಸಬೇಕು ಎಂದು ಇಲ್ಲಿಯ ಶಾಂತಾಶ್ರಮದ ಅಭಿನವ ಸಿದ್ಧಾರೂಢ ಸ್ವಾಮೀಜಿ ಹೇಳಿದರು.
ಕೈಲಾಸ ಮಂಟಪದಲ್ಲಿ ಗುರುವಾರ ಮುಂಜಾನೆ ಜರುಗಿದ ವೇದಾಂತ ಉಪನ್ಯಾಸದಲ್ಲಿ ಮಮಕಾರದಿಂ ಮಿಕ್ಕಿನ ಬಂಧನಮುAಟೆ ಎಂಬ ವಿಷಯ ಕುರಿತು ಮಾತನಾಡಿದ ಅವರು ಶರಣರು ಲೋಕ ವಿರೋಧಿಗಳಲ್ಲ, ಪ್ರಪಂಚದಲ್ಲಿದ್ದೂ ಕೂಡ ಅವರು ಮಮಕಾರವನ್ನು ಮನಸ್ಸಿನಿಂದ ಬಿಡಿಸಿಕೊಂಡಿದ್ದರು. ಸಾಮಾನ್ಯ ಜನರು ಅದಕ್ಕೆ ಅಂಟಿಕೊಂಡಿದ್ದರಿಂದ ಮುಕ್ತಿ ಎಂಬುದು ದೂರವಾಯಿತು ಎಂದರು. ಯಾವುದೂ ನನ್ನದಲ್ಲ, ಎಲ್ಲವೂ ಪರಮಾತ್ಮನದೇ ಎಂದು ನಂಬಿ ಬದುಕಿದ ಮಹಾತ್ಮರು ಪರಮಾನುಗ್ರಹ ಪಡೆದರು. ಲೋಕಹಿತಕ್ಕಾಗಿ ಬದುಕಿದರು. ಅವರಿಗೆ ಇಡೀ ಜಗತ್ತೇ ಒಂದು ಕುಟುಂಬ ಎಂದು ತಿಳಿಸಿದರು.
ಮನುಷ್ಯ ಎಲ್ಲ ಬಂಧನಗಳಿ0ದ ಬಿಡಿಸಿಕೊಳ್ಳಬಹುದು ಆದರೆ ಮಮಕಾರ ಎಂಬ ಬಂಧನದಿAದ ಮುಕ್ತನಾಗಲಾರ. ಅದಕ್ಕೆ ದೈವ ಕೃಪೆಯೂ, ಗುರುವಿನ ಅನುಗ್ರಹವೂ ಅಗತ್ಯ ಎಂದು ದಾವಣಗೆರೆಯ ಶಾಂತಾನAದ ಸ್ವಾಮೀಜಿ ನುಡಿದರು. ಸದ್ಗುರುಗಳ ಉಪದೇಶ ಮೂಲಕ ಕಿವಿಗೆ ಬಿದ್ದ ಮಾತು ಮನುಷ್ಯ ಜೀವಿಯಲ್ಲಿ ಮಮಕಾರ ಬಂಧನದಿAದ ಬಿಡುಗಡೆ ಹೇಗೆ ಎಂಬುದ ಮಾರ್ಗದರ್ಶನ ಮಾಡುತ್ತದೆ ಎಂದ ಅವರು ಸಿದ್ಧಾರೂಢ ಸ್ವಾಮೀಗಳು ತಮ್ಮ ಜೀವನದುದ್ದಕ್ಕೂ ಇದೇ ಕಾರ್ಯ ಮಾಡಿದರು ಎಂದರು.
ಕಕ್ಕೇರಿಯ ರಾಮಾನಂದ ಸ್ವಾಮೀಜಿ, ಹಂಪಿಯ ವಿದ್ಯಾನಂದ ಭಾರತಿ ಸ್ವಾಮೀಜಿ, ಸಚ್ಚಿದಾನಂದ, ಸಿದ್ಧಾನಂದ. ಸಚ್ಚಿದಾನಂದ ಸ್ವಾಮೀಜಿಗಳು, ಶಿವಪುತ್ರ ಅವಧೂತರು, ಶ್ರೀದೇವಿ, ಬಸಮ್ಮ, ಮಹಾದೇವಿ, ವೇದಾಕ್ಷಿ ಮಾತೆಯರು ಉಪಸ್ಥಿತರಿದ್ದರು.